"ಹಸಿರು ಗಾಜಿನ ಬಳೆಗಳೇ ಸ್ತ್ರೀ ಕುಲದ..." ಈ ಹಾಡನ್ನು ಯೂಟ್ಯೂಬ್ ನಲ್ಲಿ ಕೇಳುವಾಗ ಎಲ್ಲಿ ಹೋದವು ಈ ಮಧುರ ಗೀತೆಗಳು ಎಂದೆನಿಸುತ್ತಿದೆ. ಇದೊಂದೇ ಹಾಡಲ್ಲ ಹಲವಿವೆ. ಬಹುತೇಕ ಚಿತ್ರಗಳಲ್ಲಿ ಕನಿಷ್ಟ ಪ್ರಮಾಣದಲ್ಲಿಯಾದರೂ ಹಾಡುಗಳಿಗೆ ಮಾಧುರ್ಯದ ಲೇಪವಿರುತ್ತಿತ್ತು. ಶ್ರುತಿ ಸೇರಿದಾಗ ಚಿತ್ರದ 'ರಾಗ ಜೀವನ ರಾಗ' ಹಾಡಿರಬಹುದು.ಶ್ರಾವಣ ಬಂತು ಚಿತ್ರದ 'ಬಾನಿನ ಅಂಚಿಂದ ಬಂದೆ' ಹೃದಯ ಗೀತೆ,ಹೀಗೆ ಎಣಿಸಿದಷ್ಟು ಮಾಧುರ್ಯದ ಸವಿಯೇ. ಏಕೆ ಈಗಿನ ಚಿತ್ರಗಳಲ್ಲಿ ರಾಗ ಜನ್ಯತೆಯುಳ್ಳ ಇಂಪಾದ ಹಾಡುಗಳು ಬರುವುದಿಲ್ಲ ? 2000ದ ಅಂಚಿನವರೆಗೂ ಹಾಡುಗಳು ರಾಗ, ಇಂಪಿನ ದೃಷ್ಟಿಯಿಂದ ಸುಸಂಬದ್ದತೆಯಿಂದ ಕೂಡಿರುತ್ತಿದ್ದವು. ಈ ಹಾಡುಗಳನ್ನು ಅಸ್ವಾದಿಸಲು ಶಾಸ್ತ್ರೀಯ ಸಂಗೀತದ ಜ್ನಾನವೇನೂ ಬೇಕಿಲ್ಲ. ಆದರೆ ಒಮ್ಮೆ ಗಮನಿಸಿ ಇಂದಿನ ಹಾಡುಗಳು ಹೇಗಿರುತ್ತವೆಂಬುದನ್ನು
'ನಾನು ಲೂಸಾ, ನಿಮ್ಮಪ್ಪ ಲೂಸಾ',
'ಡಾರ್ಲಿಂಗ್ ಡಾರ್ಲಿಂಗ್...ನಿನ್ನ ಮಖಕ್ಕೆ ದ್ವಾಸೆ ಉಯ್ಯ....'
'ನಾನು ಲೂಸಾ, ನಿಮ್ಮಪ್ಪ ಲೂಸಾ',
'ಡಾರ್ಲಿಂಗ್ ಡಾರ್ಲಿಂಗ್...ನಿನ್ನ ಮಖಕ್ಕೆ ದ್ವಾಸೆ ಉಯ್ಯ....'
ಈ ಪಲ್ಲಟವು ನಮ್ಮ ಸಾಂಘಿಕ ಬದುಕಿನ ಸ್ವರೂಪ, ಆದ್ಯತೆಗಳು, ಪರಿಸರದೊದಿಗಿನ ಬದಲಾದ ಭೌತಿಕ ಹೊಂದಾಣಿಕೆ ಮತ್ತು ಮೌಲ್ಯಗಳನ್ನು ಸೂಚಿಸುತ್ತವೆ. ಪರಂಪರೆಯ ಸತ್ವಪೂರ್ಣ ಹಸ್ತಾಂತರದ ಕೊಂಡಿಗಳು ಕಳಚಿ ಹೋಗುತ್ತಿರಬಹುದು ಅಥವ ಆ ಕೊಂಡಿಗಳ ಬಗೆಗಿನ ನಮ್ಮ ವಿಸ್ಮೃತಿಯಿರಬಹುದು. ಬದಲಾದ ಬದುಕು, ಬದುಕಿನ ವೇಗ, ಅವಸರದ, ಪ್ರಶಾಂತಹಿತ ಅಂಶಗಳಿಂದ ಕಿಕ್ಕಿರದಿರುವ ಸನ್ನಿವಶದ ಪ್ರತಿಫಲನಗಳಷ್ಟೇ ಈ ಕರ್ಣಕಠೋರ ಹಾಡುಗಳು. ಆಧುನಿಕತೆಯಲ್ಲಿ ಎರಡು ಆಯಾಮಗಳನ್ನು ನಾವು ಗುರುತಿಸಬಹದು. ಒಂದು ಸ್ವಭಾವಜನ್ಯವಾದ (Intrinsic) ಅರಿವಿನ ವಿಸ್ತರಣೆ ಮತ್ತು ಎರಡನೆಯದಾಗಿ ಆಧುನಿಕರಣವು ಅರಿವಿನ ವಿಸ್ತರಣೆಯ ಭಾಗವಾಗಿ ಸೃಷ್ಟಿಯಾಗುವ ಬಾಹ್ಯ ಪ್ರಕ್ರಿಯೆ. ಈ ಪ್ರಕ್ರಿಯೆಯು ನೈಜ ಕ್ರಿಯಾಶೀಲವಾದ ಅರಿವಿನ ವಿಸ್ತರಣೆಯನ್ನು ಮತ್ತು ಅದರ ಸೃಜನಶೀಲತೆಯನ್ನು ಮಸುಕು ಮಾಡಬಲ್ಲದು.
ಎಲ್ಲವನ್ನು ಲೆಕ್ಕಚಾರಕ್ಕೆ ಒಳಪಡಿಸುವುದು ಆಧುನಿಕರಣದ ಪ್ರಮುಖವಾದ ಅಂಶ. ಹಣವು ಈ ದೃಷ್ಟಿಯಿಂದ ಸೃಜನಶೀಲವಾದ ಸೃಷ್ಟಿಯೇ ಆದರೂ, ಅದು, ಎಲ್ಲವನ್ನು ಭೌತಿಕ ಸಂಗತಿಗಳಿಂದಿಡಿದು ಸಂಬಂಧಗಳವರೆಗೆ, ಮಾಪನ ಮಾಡುವ ವಸ್ತುವಾಗಿ ಪರಿಣಮಿಸುತ್ತದೆ . ಲಾಭಕೋರತನ ಹಣವೆಂಬ ಸಾಧನದ ಸಾಧ್ಯತೆ. ಸಹಜವಾಗಿ ಸಂಗೀತವೂ ಕೂಡ ಮನುಷ್ಯನ ಅಸೀಮವಾದ ಅರಿವಿನ ಶೋಧನೆಯಾಗದೇ ಆಧುನಿಕರಣ ನಿರ್ಮಿಸುವ ಪರಿಣಾಮಗಳ ಬಂದಿಯಾಗಬಹುದು.ಮಾಧುರ್ಯ ಪ್ರಧಾನವಾದ ಹಾಡು-ಸಂಗೀತಕ್ಕೆ ಇರುವ ಬೇಡಿಕೆಯ ಹಿನ್ನಲೆಯಲ್ಲಿ ಬಂಡವಾಳಶಾಹಿ ವ್ಯವಸ್ಥೆಯ ಕಂಪೆನಿಗಳು ಅವುಗಳನ್ನು ದೃಶ್ಯ-ಶ್ರಾವ್ಯ ಮಾಧ್ಯಮಗಳಲ್ಲಿ ತರುವುದರ ಮುಖಾಂತರ ಹೇರಳ ಪ್ರಚಾರ ಮತ್ತು ಲಾಭ ಮಾಡಿಕೊಳ್ಳುತ್ತವೆ. ಉದಾಹರಣೆಗೆ coke studio pakistan and coke studio India ಎಂಬ fusion ಸಂಗೀತದ ಕಾರ್ಯಕ್ರಮಗಳು.
ಆಧುನೀಕರಣ ಸೃಷ್ಟಿಸುವ ಲೆಕ್ಕಾಚಾರದ, ಗುರಿ ನಿಷ್ಟ ವಿಜ್ನಾನ- ತಂತ್ರಜ್ನಾನ ದಿಂದಲೇ ಆವೃತ್ತವಾಗಿರುವ ಬದುಕಲ್ಲಿ ಅರ್ಥಗಳು ಸವೆದಾಗ ಅಥವ ಅರ್ಥದ ಶೂನ್ಯತೆಯಿಂದ (emptiness of meaning) ಕೂಡಿದಾಗ ಮನುಷ್ಯನ ಅರಿವೂ/ಪ್ರಜ್ನೆ ಆಧುನೀಕರಣದ ಲೆಕ್ಕಾಚಾರದ, ಗುರಿ ನಿಷ್ಟ ವಿಜ್ನಾನ- ತಂತ್ರಜ್ನಾನ ಅಡಿಯಾಳಾಗಿಬಿಡುತ್ತದೆ. ಅದು ಬಂಡವಾಳಶಾಹಿಯ ಅಧಿಪತ್ಯದ ಸ್ಥಿತಿ. ಪರಿಸರ ನಾಶ, ಪರಿಸರದಿಂದ ವ್ಯಕ್ತಿಗಳ ವಿಮುಖತೆ ಕೂಡ ಅರಿವು ಭೌತಿಕ-ತಂತ್ರಜ್ನಾದ ಅಡಿಯಾಳಾಗಿರುವ ಸೂಚನೆ. ಇದು ಬಂಡವಾಳಶಾಹಿ ವ್ಯವಸ್ಥೆಯು ಸಮಾಜವೊಂದನ್ನು ತೀವ್ರವಾಗಿ ಆವರಿಸಿಕೊಡಿರುವಾಗ ಆಗುವಂತದ್ದು. ಜಾಗತಿಕರಣವೆಂಬುದು ಬಂಡವಾಳಶಾಹಿ ವ್ಯವಸ್ಥೆಯನ್ನು ತೀವ್ರಗೊಳಿಸಲು ಕೆಲಸ ಮಾಡುವ ಮಾಧ್ಯಮ. ಇಲ್ಲಿ ಅರ್ಥವು ಗುರಿನಿಷ್ಟ ಕ್ರಿಯೆಯನ್ನು (instrumental action)ಪ್ರತಿನಿಧಿಸುವ ತಂತ್ರಜ್ನಾನ, ಹಣ, ಅಧಿಕಾರಶಾಹಿ, ಪ್ರಭುತ್ವದ ವಸಹಾತಾಗಿ(colony) ಬಿಡುತ್ತದೆ. ಈಗ ನಾವು ಕೇಳುವ ಮಾಧುರ್ಯವಲ್ಲದ ಹಾಡುಗಳ ಹಿಂದಿರುವುದು ಅರ್ಥ ಕಳೆದುಕೊಂಡ, ಅವಸರದ ಹಾಗು ವಿವೇಚನಶೂನ್ಯ ಬದುಕು.
