Monday, 5 November 2012

ಅರಿವು-ಅನುಭವ ಮತ್ತು ಸಮಾಜ

 ಧರ್ಮ ಮತ್ತು ಸಮಾಜದ  ನಡುವಿನ ಪರಸ್ಪರ ಸಂಬಂಧವನ್ನು ಚಿಂತನೆಯ ಒರೆಗಚ್ಚುವ ಪ್ರಯತ್ನವನ್ನು ಮಾಡುತ್ತಿದ್ದೇನೆ. ಸಮಾಜದೊಳಗೆ ಅರಳುವ ಧರ್ಮ ಸಮಾಜದ ಚೌಕಟ್ಟನ್ನು, ಅಂದರೆ ಅದರ ಸಂಯೋಜನೆಯನ್ನು ಮೀರಿ ಹೋಗುವುದಕ್ಕೆ. ಸಾಧ್ಯವಿಲ್ಲ ಎಂದು ಪ್ರತಿಪಾದಿಸುತ್ತಿದ್ದೇನೆ. ಅಂದರೆ ಧರ್ಮಗಳು ಸಾಮಾಜಿಕ ಸೃಷ್ಟಿ. ಧರ್ಮ ಸಮಾಜವೆಂಬ ವ್ಯವಸ್ಥೆಯ ಒಂದು ಭಾಗವಷ್ಟೇ. ಒಂದು ಭಾಗ ವ್ಯವಸ್ಥೆಯ ಮೇಲೆ ತೀವ್ರವಾದ ಪ್ರಭಾವ ಬೀರಬಹುದು. ಆದರೆ ಭಾಗವೊಂದೇ ವ್ಯವಸ್ಥೆಯಾಗುವುದಕ್ಕೆ ಸಾಧ್ಯವಿಲ್ಲ. ಈ ಪ್ರಯತ್ನವನ್ನು ನಾನು ಎರಡು ಅಥವ ಮೂರು ಲೇಖನಗಳಲ್ಲಿ ಮಾಡುತ್ತಿದ್ದು, ಮೊದಲನೇ ಭಾಗವಾದ ಈ ಲೇಖದಲ್ಲಿ ಸಾಮಾಜಿಕ ಸೃಷ್ಟಿಯ ನೆಲೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ.

      ಸಮಾಜವೆಂಬ ವಿಚಾರ (idea) ಮತ್ತು ಅದರ ಅಸ್ತಿತ್ವದ(existence) ಬಗ್ಗೆಯೇ ಜಿಜ್ನಾಸೆಗಳಿವೆ. ಕೆಲವರಿಗೆ ಸಮಾಜವೆಂಬುದು ವಸ್ತುನಿಷ್ಟವಾದ ಸತ್ಯವಾಗಿ (objective truth) ಗೋಚರಿಸಬಹುದು. ಪ್ರೆಂಚ್ ನ ಶ್ರೇಷ್ಟ ಅಭಿಜಾತ ಸಮಾಜಶಾಸ್ತ್ರಜ್ನ ಎಮಿಲಿ ದರ್ಖೈಮ್(Emile Durkheim) ರವರಿಗೆ ಸಮಾಜವು ತನ್ನದೇ ಅಸ್ತಿತ್ವವನ್ನ್ಜು ಹೊಂದಿದೆ.  ಅವರು ಸಮಾಜವನ್ನು ಈ ಕಾರಣದಿಂದಲೇ sui generis ಎಂದು ಕರೆದರು. ಮತ್ತು ಸಮಾಜ ವ್ಯಕಿಗಳಿಂದ ಸ್ವತಂತ್ರವಾದುದು,  ವ್ಯಕ್ತಿಗಳಿಂದಲೇ ಸಮಾಜ ಸೃಷ್ಟಿಯಾಗಿದ್ದರೂ ಅವರ ಮೇಲೆ ನಿರ್ಬಂಧವನ್ನೇರುವ ಶಕ್ತಿ ಹೊಂದಿದೆ ಎಂದು ವಾದಿಸಿದರು. ಆದರೆ ಈ ಪ್ರತಿಪಾದನೆಗೆ ಸಂಪೂರ್ಣವಾದ ವಿರುದ್ಧ ನೆಲೆಯಲ್ಲಿ ಹಲವು ಸಮಾಜಶಾಸ್ತ್ರಜ್ನರು ತಮ್ಮ ದೃಷ್ಟಿಕೋನಗಳನ್ನು ಮಂಡಿಸಿದ್ದಾರೆ. ಸಮಾಜವನ್ನು ಶುದ್ಧ ಮೂರ್ತ ವಾಸ್ತವದ ನೆಲೆಯಲ್ಲಿ ವ್ಯಾಖ್ಯಾನಿಸಲು ಅವರು ನಿರಾಕರಿಸಿದ್ದಾರೆ. ಅವರ ಪ್ರಕಾರ ಸಮಾಜವು ವ್ಯಕ್ತಿಗಳ ಸಾಮಾಜಿಕ ಕ್ರಿಯೆಯಿಂದ (social action)  ಸೃಷ್ಟಿಸಲಪಡುತ್ತದೆ ಮತ್ತು ಮರುಸೃಷ್ಟಿಸಲ್ಪಡುತ್ತದೆ (society is being produced and reproduced by the acts of individuals or actors).

            ಕ್ರಿಯೆಯೆಂಬುದು ಸಂಭವಿಸದೇ ಸಮಾಜ ಮತ್ತು ಸಾಮಾಜಿಕವಾದ ಯಾವ ಸಂಗತಿಗಳನ್ನು ಕಾಣುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಸಮಾಜದ ಅಸ್ತಿತ್ವವು ವ್ಯಕ್ತಿಗಳ ಕ್ರಿಯೆಗಳನ್ನಾಧರಿಸಿದೆ. ಕ್ರಿಯೆಯಲ್ಲಿ ತೊಡಗುವವರು ಪರಸ್ಪರರ ಬಗ್ಗೆ ಅರಿವಿರಬೇಕು, ಎದುರಿನ ವ್ಯಕ್ತಿಯ ಕ್ರಿಯೆಗೆ ವ್ಯಕ್ತಿಗತ ನೆಲೆಯಲ್ಲಿ ಅರ್ಥವನ್ನು (meaning on subjective premises) ನೀಡಬೇಕು, ಅರ್ಥದ (meaning) ಆಧಾರದ ಮೇಲೆಯೇ ಪ್ರತಿಕ್ರಿಯೆ (response) ಅವಲಂಬಿಸಿರುತ್ತದೆ. ಅರ್ಥವು ವ್ಯಕ್ತಿಗತ ನೆಲೆಯಾಧಾರಿತವಾಗಿರುವುದರಿಂದ ಅದು ವ್ಯಕ್ತಿಗಳಲ್ಲಿ ವಿವರಣೆಗೆ ಒಳಪಡುತ್ತದೆ. ಅರ್ಥವು, ಆದ್ದರಿಂದ, ಅರ್ಥೈಸುವಿಕೆಗೆ (interpretation) ಒಳಪಡುತ್ತದೆ. ಅರ್ಥವು ಈ ಕಾರಣದಿಂದ ಸಾಂಕೇತಿಕವಾಗುತ್ತದೆ.
         Phenomenologyಯು ವಾದಿಸಿರುವ ಪ್ರಕಾರ ಅರಿವು (consciousness) ವ್ಯಕ್ತಿಗಳಲ್ಲಿ ಪ್ರಾಥಮಿಕವಾದ ಸಂಗತಿ. ಅರಿವಿನಿಂದಲೇ ವ್ಯಕ್ತಿಗೆ ಅನುಭವಗಳು (experience) ಸಾಧ್ಯವಾಗುತ್ತದೆ. ಅರಿವಿನಿಂದ ಕೂಡಿದ ಅನುಭವಗಳು(conscious experience) ಪ್ರತಿ ವ್ಯಕ್ತಿಯಲ್ಲಿ ಪ್ರಾಥಮಿಕವಾಗಿರುತ್ತವೆ. ಈ ಅರಿವು ಸದಾ ಉದ್ದೇಶಪೂರ್ವಕತೆಯನ್ನು (intentionality) ಹೊಂದಿರುತ್ತದೆ. ಅಂದರೆ ಅದು ಸದಾ ವಸ್ತು, ವ್ಯಕ್ತಿ, ವಿಚಾರ ಮತ್ತು ಇತರ ಸಂಗತಿಗಳಿಗೆ ಅಭಿಮುಖವಾಗಿ ಹರಿಯುತ್ತಿರುತ್ತದೆ. ಅರಿವು ಸದಾ ವಸ್ತುವೊಂದರ(ಗಳ) ಸುತ್ತ ಚಲಿಸುತ್ತದೆ. ಉದ್ದೇಶವಿರದ ಅರಿವನ್ನು ಅನುಭವಿಸುವುದಕ್ಕೆ ಸಾಧ್ಯವಿಲ್ಲ. ಅರಿವು ಶೂನ್ಯದಿಂದ ಕೂಡಿರುವುದಕ್ಕೆ ಸಾಧ್ಯವಿಲ್ಲ.

                ಅರಿವು-ಅನುಭವಿನ ರಚನೆಯು ಹಲವು ಪ್ರಕಾರಗಳಿಂದ ಕೂಡಿದೆ. ಸಂವೇದನೆ, ಆಲೋಚನೆ, ಕಲ್ಪನೆ, ಭಾವನೆಗಳು, ದೇಹದ ಬಗೆಗಿನ ಅರಿವು, ಇಚ್ಛೆ ಮತ್ತು ಭಾಷೆಯೊಳಗೊಂಡ ಸಾಮಾಜಿಕ ಚಟುವಟಿಕೆಗಳು ಅರಿವು-ಅನುಭವದ ವಿಭಿನ್ನ ಪ್ರಕಾರಗಳು. ಸಮಯ, ಸ್ಥಳದ ಬಗೆಗಿನ ಎಚ್ಚರ, ನಮ್ಮ ಅನುಭವದ ಬಗಿಗಿನ ಪ್ರಜ್ನಾಪೂರ್ವಕವಾದ ಎಚ್ಚರ, ಸ್ವಯಂ  (self) ಮತ್ತು ಪ್ರತಿ ದಿನದ ಚಟುವಟಿಕೆಗಳು ನಮ್ಮ  ಅರಿವು-ಅನುಭವವನ್ನು ರೂಪಿಸುತ್ತವೆ. ಅಂದರೆ ನಮ್ಮ ನಿತ್ಯ ಜೀವನದಲ್ಲಿ ನಾವು ಹೊಂದಿರುವ  ಅರಿವು-ಅನುಭವವು ನಾವು ಬದುಕುವ ಸಂದರ್ಭ-ಪರಿಸ್ಥಿತಿಗಳಿಂದಲೇ ರೂಪಿಸಲ್ಪಡುತ್ತವೆ.

 
                  ಮನುಷ್ಯರು ಹೊಂದಿರುವ ಅರಿವು ಅವರ ಮಿದುಳು-ನರ ಮಂಡಲ ವ್ಯವಸ್ಥೆಯ ಸಂಕೀರ್ಣತೆಯನ್ನು ಅವಲಂಬಿಸಿದೆ. ಮನುಶ್ಯನ ಅರಿವಿನ ರಚನೆಯನ್ನು ನರ ವ್ಯವಸ್ಥೆಯಲ್ಲಿ ಸಂಭಿಸುವ ರಾಸಾಯನಿಕ ಬದಲಾವಣೆಗಳ ಮುಖಾಂತರ ಅರ್ಥಮಾಡಿಕೊಳ್ಳುವ ಪ್ರಯತ್ನವನ್ನು Neuro phenomenology ಎಂದು ಕರೆಯಬಹುದು. ನಮ್ಮ  ಅನುಭವಕ್ಕೆ  ಗೋಚರವಾಗುವ  ವಾಸ್ತವವು (reality) ಇಂದ್ರೀಯಗಳಿಂದ ನಿರ್ದರಿಸಲ್ಪಡುತ್ತವೆ. ನಮಗೆ ಗೋಚರಿಸುವ ವಾಸ್ತವವು ತನ್ನದೇ ಸ್ವತಂತ್ರವಾದ ಅಸ್ತಿತ್ವವನ್ನು ಹೊಂದಿರಬಹುದು. ಉದಾಹರಣೆಗೆ ನಮ್ಮ ಮಿದುಳು ಗುರುತಿಸುವ ಬಣ್ಣಗಳು ಕಾಮನಬಿಲ್ಲಿನಲ್ಲಿರುವ  ಏಳು ಬಣ್ಣಗಳಷ್ಟೇ. ಉಳಿದ ಪ್ರಕಾರಗಳು ಆ ಏಳು ಬಣ್ಣಗಳ ಮಿಶ್ರಣ ಮತ್ತು ಸಂಯೋಜನೆಯಿಂದ ಉದ್ಭವಿಸುತ್ತವೆ. ನಮ್ಮ ಮಿದುಳು ಗ್ರಹಿಸುವ ವಿಧಗಳಿಗಿಂತ ಹೆಚ್ಚು ಬಣ್ಣಗಳು ಅಸ್ತಿತ್ವದಲ್ಲಿರಬಹುದು.ಅವುಗಳಿಗೆ ನಾವು ಕುರುಡಾಗಿದ್ದೇವೆ. ಆದರಿಂದ ನಮ್ಮ ಅನುಭವಕ್ಕೆ ಸಿಗುವ ವಾಸ್ತವವೇ ನಿಜವಾದ ವಾಸ್ತವವಲ್ಲ. ಹಾಗೆಯೇ ಕತ್ತಲ್ಲಲ್ಲಿ ನಮಗೆ ಕಣ್ಣು ಕಾಣುವುದಿಲ್ಲ. ಆದರೆ ಕೆಲುವು ಜೀವಿಗಳಿಗೆ ರಾತ್ರಿಯಲ್ಲಿಯೂ ದೃಷ್ಟಿ ಸಾಧ್ಯವಾಗುತ್ತದೆ. ನಮ್ಮ ಮೆದುಳಿನ ರಚನೆ ನಮ್ಮ  ಅರಿವನ್ನು ನಿರ್ಧರಿಸುತ್ತದೆ.



              ಮನುಷ್ಯ ಸೃಷ್ಟಿಸುವ, ಕಲಿಯುವ ಸಂಗತಿಯು ಅವನ ಮಿದುಳು ಮತ್ತು ಅವನ ಸಾಂಘಿಕ ಜೀವನವನ್ನು (collective life) ಅವಲಂಬಿಸಿದೆ. ಸಾಂಘಿಕ ಜೀವನವೇ ಮನುಷ್ಯನ ಮನಸ್ಸು ಮತ್ತು ಅವನ ಸಂಸ್ಕೃತಿಯ ಬೆಳವಣಿಗೆಗೆ ಕಾರಣವಾಗಿದೆ. ಆದ್ದರಿಂದ ಎಲ್ಲಾ ವಿಚಾರಗಳು (ideas, ಅಮೂರ್ತ), ಉಪಕರಣಗಳು (ಭೌತಿಕ ಸ್ವರೂಪದ) ಮನುಷ್ಯನ ಈ ಸಾಂಘಿಕ ಜೀವನನ್ನು ಅವಲಂಬಿಸಿವೆ. ಈ ಸಾಂಘಿಕ ಜೀವನವೇ ಮನುಷ್ಯನ ಮಿದುಳಿನ ಮತ್ತಷ್ಟು ವಿಕಸನಕ್ಕೆ ಇರುವ ಅತ್ಯಾವಶ್ಯಕವಾದ ನೆಲೆಯಾಗಿದೆ. ಎಲ್ಲವೂ, ಅಂದರೆ ಧರ್ಮವೂ ಸೇರಿದಂತೆ, ಮನುಷ್ಯನ ಅರಿವು ಮತ್ತು ಮನಸ್ಸಿನ ಸೃಷ್ಟಿಯಷ್ಟೇ. ಸಾಂಘಿಕ ಜೀವನ ಇವೆಲ್ಲದಕ್ಕೆ ಊರುಗೋಲಾಗಿದೆ. ದೇವರು ಮತ್ತು ಧರ್ಮವೂ ಮನುಷ್ಯನ ಈ ಅಭೂತಪೂರ್ವ ಶಕ್ತಿಯ ಅಭಿವ್ಯಕ್ತಿಯಷ್ಟೇ.  ಪ್ರಸಕ್ತ ಲೇಖನದಲ್ಲಿ ನಾನು ಪರಿಚಯಿಸಿರುವ ಈ ವಿವರಣೆಯನ್ನು ನೀವು ಸಾಮಾಜಿಕ ಸೃಷ್ಟಿಯ (social construction) ನೆಲೆಯೆಂದೇ ಪರಿಗಣಿಸಬಹುದು. ದೇವರು ಮತ್ತು ಧರ್ಮಗಳು ಈ ಸಾಮಾಜಿಕ ಸೃಷ್ಟಿಯ ನೆಲೆಗಳು ಮಾತ್ರ, ಅವುಗಳನ್ನು ಮೀರಿ ಸೃಷ್ಟಿಯಾಗಿರುವುದಕ್ಕೆ ಯಾವ ಆಧಾರಗಳೂ ಇಲ್ಲ.

Wednesday, 31 October 2012

ಭಾಷೆ, ಸಂಸ್ಕೃತಿ ಮತ್ತು ಸಮಾಜ: ಒಂದು ಸಮಾಜಶಾಸ್ತ್ರೀಯ ಪ್ರತಿಫಲನ





 ಚಿತ್ರ ಕೃಪೆ:http://www.ancientscripts.com/old_kannada.html

ಇಂದು ಕನ್ನಡ ರಾಜ್ಯೋತ್ಸವ. ಭಾರತದಲ್ಲಿ ಭಾಷೆಯ ಮೇಲೆ ಭೌಗೋಳಿಕ ಪ್ರದೇಶಗಳನ್ನು ರಚಿಸಿದ ದಿನ. ಭಾಷೆ ಮನುಷ್ಯನ ಸಾಂಘಿಕ ಜೀವನದಲ್ಲಿ ಹೊಂದಿರುವ ಪ್ರಾಮುಖ್ಯತೆಯನ್ನು ಅರಿಯಲು ಒಂದು ಪುಟ್ಟ ಪ್ರಯತ್ನ ಮಾಡುತ್ತಿರುವೆ.

     ಮನುಷ್ಯರ ಬದುಕು ಮತ್ತು  ಸಮಾಜವು ತನ್ನ ಅಸ್ಮಿತೆಯನ್ನು ಭಾಷೆಯ ಮುಖಾಂತರವೇ  ಪಡೆಯುತ್ತದೆ. ಉಳಿದ ಜೀವಿಗಳಿಗೆ ಹೋಲಿಸಿದರೆ ಮನುಷ್ಯನ ಕ್ರಿಯೆಗಳು ಕೇವಲ insticntsಗಳ ಮೇಲೆ ಆಧಾರಿತವಾಗಿರದ, ಪುನಾರಾವರ್ತಿತ ಸ್ವರೂಪದಾಗದೇ ಅರ್ಥ, ವಿವರಣೆ ಮತ್ತು ಸಂಕೇತಗಳಿಂದ ಕೂಡಿದೆ. ಭಾಷೆಯೆಂದರೆ ಏನು? ಹಲವು ಸ್ತರದ ಉತ್ತರಗಳು ನಮಗೆ ಎದುರಾಗಬಹುದು. ಆದರೆ ಭಾಷೆ Semiologistsಗಳ ಪ್ರಕಾರ ಮೂಲಭೂತವಾಗಿ ಶಬ್ದ (sound). ವಿವಿಧ, ವಿಭಿನ್ನ, ಸಂಕೀರ್ಣವಾದ ಶಬ್ದಗಳನ್ನು ಹೊರಡಿಸುವ ಸಾಮರ್ಥ್ಯವಿರುವ ಮನುಷ್ಯ ಆ ಶಬ್ದಗಳಿಗೆ ಅರ್ಥವನ್ನು(meaning) ಕೊಡುವ ಸಾಮರ್ಥ್ಯ ಹೊಂದ್ದಿದ್ದಾನೆ. ಶಬ್ದಗಳ ವ್ಯತ್ಯಾಸದ ಆಧಾರದ ಮೇಲೆ ಪ್ರಭೇದಿಕರಿಸಿ(differentiate), ವಿಭಿನ್ನ ಅರ್ಥಗಳನ್ನು ಕೊಡುತ್ತಾನೆ.


    ಭೌತಿಕ ಜಗತ್ತಿನಲ್ಲಿರುವ ವಸ್ತುಗಳು ಪ್ರಜ್ನೆಯನ್ನು ಹೊಂದಿರುವುದಿಲ್ಲ. ಆದರೆ ಮನುಷ್ಯ ಅರಿವು ಮತ್ತು ಅರಿವಿನಿಂದ ಅರಳುವ ಅನುಭವಗಳನ್ನು (conscious experience) ಹೊಂದಿದ್ದಾನೆ.ಆದ್ದರಿಂದ ಮನುಷ್ಯನು ಪ್ರಪಂಚದೊಳಗೊಂದು ಪ್ರಪಂಚವನ್ನು ಹೊಂದಿದ್ದಾನೆ (world within the world). ಅಲ್ಲಿಗೆ ಮನುಷ್ಯ ತನ್ನ ಮತ್ತು ಇತರ ಸಾಮಾಜಿಕ ಕ್ರಿಯೆಗಳಿಗೆ ಅರ್ಥವನ್ನು ನೀಡುತ್ತಾನೆ; ಅರ್ಥವು ವ್ಯಕ್ತಿಗತ ನೆಲೆಯ ಮೇಲೆ ವ್ಯಾಖ್ಯಾನಿಸಲ್ಪಟ್ಟಿರುತ್ತದೆ; ಆದ್ದರಿಂದಲೇ ಅರ್ಥಗಳು ಸಂಕೇತಗಳಾಗುತ್ತವೆ(symbols); ನಮ್ಮ ಬಹುಪಾಲು ಕ್ರಿಯೆಗಳು verbal expressionsಗಳಾಗಿರುತ್ತವೆ. ಕ್ರಿಯೆಯಲ್ಲಿ ತೊಡಗು ಎಂದರೆ ಸಂಭಾಷಿಸು ಎಂಬ ಆಯಾಮವನ್ನು ಬಹುತೇಕವಾಗಿ ಒಪ್ಪಿಕೊಳ್ಳಬಹುದು. ಉಳಿದ ಅಂಶಗಳು non-verbal gesturesಗಳಾಗಿರುತ್ತವೆ. ಈ non-verbal gesturesಗಳು ಭಾಷಿಕ ಕ್ರಿಯೆಯ ಭಾಗವಾದಾಗ ಕ್ರಿಯೆ ಮತ್ತಷ್ಟು ಸಾಂಕೇತಿಕ ಮತ್ತು ಸಂಕೀರ್ಣವಾಗುತ್ತದೆ. ಆದ್ದರಿಂದ ಶಬ್ಗಗಳು ಅರ್ಥಪೂರ್ಣವಾಗುವುದು ನಾವು ಕೊಡುವ ಅರ್ಥದ ಆಧಾರದ ಮೇಲೆಯೇ. ಈ ಕಾರಣದಿಂದಲೇ ಪರಸ್ಪರ ಸಂಬಂಧವಿಲ್ಲದ ಎರಡು ಭಾಷೆಗಳಲ್ಲಿ ಒಂದೇ ಶಬ್ದದ ಪದಗಳು ಕೇವಲ ಆಕಸ್ಮಿಕವಾಗಿರುತ್ತವೆ (random), ಶಬ್ದಗಳು ಒಂದೇ ಆದರೂ ಅರ್ಥ ಬೇರೆಯೇ ಆಗಿರುತ್ತದೆ.
     ಹಾಗಾದರೇ ಭಾಷೆಯ ಪದಗಳಿಗೆ ಅರ್ಥ ರೂಪುಗೊಳ್ಳುವ ನೆಲೆಯಾವುದು? ವ್ಯಕ್ತಿಯ ಪ್ರಜ್ನೆ ಮತ್ತು ಆ ಪ್ರಜ್ನೆಗೆ ಮುಖಾಮುಖಿಯಾಗುವ ನಮ್ಮ ವಾಸ್ತವ (reality) ಅರ್ಥಗಳನ್ನು ಸೃಷ್ಟಿಸುತ್ತವೆ. ವಾಸ್ತವವೆಂದರೆ ಇತರೆ ವ್ಯಕ್ತಿಗಳು(ಸಮಾಜ) , ಪ್ರಕೃತಿ, ಇತರೆ ಜೀವ ಸಂಕುಲಗಳು. ವ್ಯಕ್ತಿಗಳು ತಮ್ಮನು ಸುತ್ತುವರಿದಿರುವ ಪರಿಸರವನ್ನು ಗುರುತಿಸಲು ಶಬ್ದಗಳನ್ನು ಮತ್ತು ಅವುಗಳಿಗೆ ಅರ್ಥವನ್ನು ನೀಡುತ್ತಾರೆ. ಅರ್ಥವು ಒಬ್ಬ ವ್ಯಕ್ತಿಯ ಮೇಲೆ ಅವಲಂಬಿಸದೇ ಸಾಮೂಹಿಕ ಅಥವ ಸಮಷ್ಟಿ ನೆಲೆಯಾಧಾರಿತವಾಗಿರುತ್ತದೆ(collective). ಅರ್ಥಗಳು ಆದ್ದರಿಂದ ಹಂಚಿಕೊಳ್ಳಲ್ಪಟ್ಟ ಗುಣವನ್ನು ಹೊಂದಿವೆ (shared meanings). ಆದ್ದರಿಂದಲೆ ಕನ್ನಡದಲ್ಲಿ ಹೆಸರು ಎಂದಾದಲ್ಲಿ, ಹಿಂದಿಯಲ್ಲಿ ನಾಮ್, ತುಳುವಿನಲ್ಲಿ ಪುದರ್  ಎಂದಾಗುತ್ತದೆ. ಹೆಸರು ಮತ್ತು ಪುದರ ನಡುವೆ ನಂಟಿದೆ. ಕನ್ನಡದಲ್ಲಿ ಮೊದಲಾಕ್ಷರ ಇದ್ದರೆ, ತುಳುವಿನಲ್ಲಿ ಅದು ಎಂದಿದೆ.ಕೊನೆಯ ಅಕ್ಷರ "ರ" ಎರಡು ಭಾಷೆಗಳಲ್ಲಿ ಒಂದೇ ಆಗಿದೆ. ಒಂದು ವೇಳೆ ಪಕಾರ ಕನ್ನಡದಲ್ಲಿ ಉಳಿದ್ದಿದ್ದರೆ ಹೆಸರು ಪೆಸರು ಎಂದಾಗುತ್ತಿತ್ತು. ಪೆಸರ್ ಮತ್ತು ಪುದರ್ ನ ಶಬ್ದದ ನಡುವೆ ಸಾಮ್ಯತೆಯನ್ನು ಗಮನಿಸಿ. ತುಳು ಮತ್ತು ಕನ್ನಡ ಒಂದೇ ಭಾಷಾ ಕುಟುಂಬಕ್ಕೆ ಸೇರಿರುವುದರಿಂದ ಈ ಸಾಮ್ಯತೆಯನ್ನು ನೀವು ಗಮನಿಸಬಹುದು. ಆದರೆ ಕನ್ನಡದ ಹೆಸರು ಮತ್ತು ಹಿಂದಿಯ ನಾಮ್ ನಡುವೆ ಆ ಸಂಬಂಧವಿಲ್ಲ. ಅಲ್ಲಿಗೆ ಎರಡು ಶಬ್ದಗಳು ಭಿನ್ನ ಧ್ವನಿಯನ್ನು ಹೊರಡಿಸುತ್ತವೆ. ಆ ಭಿನ್ನ ಧ್ವನಿಗಳಿ ಬೇರೆ ಬೇರೆ ನಿರ್ದಿಷ್ಟ ಭೌಗೋಳಿಕ  ಪ್ರದೇಶಗಳಲ್ಲಿರುವ ಭಾಷಿಕ ಸಮುದಾಯಗಳಿಂದ ಸೃಷ್ಟಿಯಾದ ಶಬ್ದಗಳು. ಶಬ್ದ ಭಿನ್ನ, ಆದರೆ ಅರ್ಥ ಒಂದೇ. ಕಾಫಿ ಎಂಬುದು ಪೇಯವಾದರೇ, ಹಿಂದಿಯಲ್ಲಿ ಕಾಫಿ ಸಾಕಷ್ಟು ಎಂಬ ಅರ್ಥ ಬರುತ್ತದೆ. ಶಬ್ದಗಳು ಒಂದೇ ಆಗಿರುವುದು ಆಕಸ್ಮಿವಷ್ಟೇ. ಅರ್ಥಗಳು ಬೇರೆಯೇ ಆಗಿವೆ.
       ಮನುಷ್ಯ ಸಮಾಜ ಈ ಶಬ್ದಗಳ ಆಧಾರದ ಮೇಲೆಯೇ ತಾನು ವಾಸಿಸುತ್ತಿರುವ ಪರಿಸರವನ್ನು ಗುರುತಿಸುವ (designating) ಕೆಲಸ ಮಾಡುತ್ತದೆ. ಶಬ್ದಗಳ ವ್ಯತ್ಯಾಸವು ಅರ್ಥಗಳನ್ನು ಪಡೆದುಕೊಳ್ಳುತ್ತವೆ. ಈ ಕಾರಣದಿಂದಲೇ ಒಂದು  ಸಮುದಾಯದ ಭಾಷೆ ಬದಲಾದಂತೆ ಸಂಸ್ಕೃತಿಯು ಬದಲಾಗುತ್ತದೆ. ಶಬ್ದ ಮತ್ತು ಅರ್ಥಗಳೇ ವ್ಯಕ್ತಿಗಳ ಕ್ರಿಯೆಗಳಲ್ಲಿ ವಿನಿಮಯವಾಗುತ್ತವೆ. ಒಂದು ಭಾಷೆಯಲ್ಲಿ ಪದವೊಂದು ಸೂಚಿಸುವ ಅರ್ಥವು ಇನ್ನೊಂದು ಭಾಷೆಯಲ್ಲಿ ಇರದೇ ಹೋಗಬಹುದು.ಉದಾಹರಣೆಗೆ, ಕರಾವಳಿ ತೀರದ ಜನರು ತಮ್ಮ ಭೌಗೋಳಿಕ ಸನ್ನಿವೇಶದಲ್ಲಿ ಬಳಸುವ ಪದಾರ್ಥಗಳು ಅಥವಾ ವಸ್ತುಗಳು ಬಯಲುಸೀಮೆಯಲ್ಲಿ ಸಿಗದೇ ಇರಬಹುದು.ಆಗ ಆ ವಸ್ತುಗಳನ್ನು ಸೂಚಿಸುವ ಶಬ್ದಗಳು, ಅರ್ಥಗಳು ಹಾಗು ಕಲ್ಪನಗಳೇ ಇರುವುದಿಲ್ಲ.

              ಭಾಷೆ ಸಂಸ್ಕೃತಿಯ ವಾಹಕವೂ ಹೌದು (Vehicle). ಸಂಸ್ಕೃತಿಯು ಕಲಿಕೆಯಿಂದ(learning) ಅರ್ಜಿಸಲ್ಪಡುವ ಅಖಂಡ ಸಮುಚ್ಛಯವಾಗಿದ್ದು ( complex whole) ಮನುಷ್ಯನಿಂದ ಸೃಷ್ಟಿಸಲ್ಪಟ್ಟ ಸಮಸ್ತವು ಸಂಸ್ಕೃತಿಯಾಗುತ್ತದೆ. ಕಲಿಕೆಯು ಸಾಧ್ಯವಾಗುವುದೇ ಹಂಚಿಕೊಳ್ಳಲ್ಪಟ್ಟ  ಅರ್ಥವನ್ನು ಹೊಂದಿರುವ ಶಬ್ದಗಳ ವಿನಿಮಯದಿಂದ. ಜೊತೆಯಾಗಿ ಜೀವಿಸುವುದು ಮತ್ತು ಅರ್ಥದಿಂದ ಕೂಡಿದ ಶಬ್ದಗಳ ವ್ಯವಸ್ಥೆ ಅಂದರೆ ಭಾಷೆಯ ಬಳಕೆ ನಿರ್ಧಾರಕ ಅಂಶಗಳಾಗುತ್ತವೆ.

           ಭಾಷೆ ಜಾನಪದೀಯವೂ ಹೌದು ಹಾಗೆಯೇ ಬೌದ್ದಿಕವೂ ಹೌದು. ಭಾಷೆ ರೂಪುಗೊಳ್ಳುವುದು ಆರಂಭದಲ್ಲಿ ಮೌಖಿಕವಾಗಿ (oral). ಮೌಖಿಕ ಪರಂಪರೆಯೇ ಯಾವುದೇ ಭಾಷೆಯ ಶ್ರೀಮಂತಿಕೆಯನ್ನು ರೂಪಿಸುತ್ತದೆ. ಆದರೆ ಭಾಷೆ ಮೂಲತ: ಮೌಖಿಕವಾದರು ಅದೊಂದು ಪ್ರಾಥಮಿಕ ಬೌದ್ಧಿಕ ಕ್ರಿಯೆ. ಏಕೆಂದರೆ ಶಬ್ದದ ಆಯ್ಕೆ, ಅದರ ಅರ್ಥದ ನಿರೂಪಣೆಯಲ್ಲಿ ಬೌದ್ದಿಕ ಕಸರತ್ತು ಇದ್ದೇ ಇರುತ್ತದೆ. ಪ್ರಾಥಮಿಕ ಬೌದ್ದಿಕ ಕಸರತ್ತು ಲಿಪಿಯ ಮುಖಾಂತರವೇ ಇರಬೇಕು ಎಂದೇನಿಲ್ಲ. ಕಾಲ ಉರುಳಿದಂತೆ ಭಾಷೆ ಮನುಷ್ಯನ ಪ್ರಜ್ನಾಪೂರ್ವಕವಾದ ಪ್ರತಿಪಲನವಾಗಬಹುದು (conscious reflection). ಆಗ ಭಾಷೆಯ ರಚನೆ ಅಂದರೆ ವ್ಯಾಕರಣವನ್ನು ಸೋಪಜ್ನವನ್ನಾಗಿಸುವ, ಆ ಮುಖಾಂತರ ಎಲ್ಲೇ ಅಥವ ವ್ಯಾಪ್ತಿ ಸೃಷ್ಟಿಯಾಗುತ್ತದೆ.

      ಭಾಷೆಯೆಂಬುದು ಒಂದು ಗುರುತಾಗಿ ಅಥವ ಅನನ್ಯತೆಯಾಗಿ (identity) ಧರ್ಮಕ್ಕಿಂತ ಹೆಚ್ಚು ವಿಶಾಲವಾದುದು. ಧರ್ಮವು ಸಮಾಜವನ್ನು ಲಂಬಾಕೃತವಾಗಿ (vertical) ಐಕ್ಯತೆಗೊಳಿಸಿದ್ದರೆ, ಭಾಷೆಯು ಸಮಾನಾಂತರವಾಗಿ (horizontal) ವ್ಯಕ್ತಿಗಳನ್ನು ಬೆಸೆಯುತ್ತದೆ. ನಿರ್ದಿಷ್ಟ ಭಾಷೆಯೊಂದನ್ನು ಹಲವು ಧರ್ಮ, ಜಾತಿಗಳು ಮಾತನಾಡಬಹುದು.ಭಾಷೆ ಈ ವಿಭಿನ್ನ ಧರ್ಮ ಮತ್ತು ಜಾತಿಗಳ ಜನರನ್ನು ಬೆಸೆಯುತ್ತದೆ.
     ಭಾಷೆಯೆಂಬುದು ಎಡಪಂಥೀಯ ಹಾಗೆಯೇ ಬಲಪಂಥೀಯ ಆಯಾಮವನ್ನು ಹೊಂದಿದೆ. ವಿಶಾಲಾರ್ಥದಲ್ಲಿ ಬಳಕೆಯಾದಾಗ ಅದು ಜನಕೇಂದ್ರಿತ, ಜನಸಾಮಾನ್ಯರ ಅಸ್ತಿತ್ವದ ಭಾಗವಾಗುತ್ತದೆ. ಆದರೆ ಭಾಷೆಯೆಂಬುದು ಕೇವಲ ಭಾಷಿಕ ಸಂಗತಿಯಷ್ಟೇ(linguistic phenomenon) ಅಲ್ಲ. ಭಾಷೆಯು ಅಧಿಕಾರ ಮತ್ತು ಯಜಮಾನ್ಯತೆಯ ಅಭಿವ್ಯಕ್ತಿಯಾಗಿಯೂ ಪರಿಣಮಿಸುತ್ತದೆ( language as an expression and manifestation of power and dominance. ಈ ದೃಷ್ಟಿಯಿಂದ ಭಾಷೆ  ಬಲಪಂಥೀಯ ಮತ್ತು ಊಳಿಗಮಾನ್ಯ ವ್ಯವಸ್ಥೆಯ ಅಭುವ್ಯಕ್ತಿಯಾಗುತ್ತದೆ. ಸಮಾಜಿಕ ರಚನೆಯು ಅಸಮಾನ ನೆಲೆಗಳ ಮೇಲೆ ಆಧಾರಿತವಾಗಿದ್ದಾಗ, ಯಜಮಾನ್ಯತೆಯನ್ನು ಪಡೆಯುವ ಗುಂಪುಗಳಿಗೆ ಭಾಷೆಯು ಭಾರಿ ಅಭಿಮಾನದ, ಹೆಮ್ಮೆಯ ಸಂಕೇತವಾಗುತ್ತದೆ. ಆದರೆ ಅಧೀನವಾಗಿರುವ ಗುಂಪುಗಳಿಗೆ ಅವರಾಡುವ ಭಾಷೆಯೇ ದಮನಕಾರಿಯೆಂದನಿಬಹುದು. ಅಂತಹ ಗುಂಪುಗಳು ತಮ್ಮ ವಿಮೋಚನೆಗೆ ಮಾರ್ಗಗಳನ್ನು ಸೃಷ್ಟಿಸುವ ಭಾಷೆಯನ್ನು ಸ್ವೀಕರಿಸುವುದು ಸಾಮಾನ್ಯ.
 
       ನಿರ್ದಿಷ್ಟ ಭಾಷೆ ಮತ್ತು ಆ ಭಾಷೆಯನ್ನಾಡುವ ಗುಂಪಿನ ಸಂಬಂಧ ಯಾವಾಗಲು ಶಾಶ್ವತವಾಗಿರಬೇಕೆಂದೇನೂ ಇಲ್ಲ. ಕಾಲ ಬದಲಾದಂತೆ ಭಾಷೆಯೊಂದು ಹೊಂದಿರುವ ಯಜಮಾನ್ಯತೆ ಮತ್ತು ಪ್ರಭಾವವು  ಉದುರಿ ಹೋದಾಗ, ಮತ್ತೊಂದು ಭಾಷೆ ಪ್ರಬಲವಾದಾಗ ಜನರು ತಮ್ಮ ನುಡಿಗಳಿನ್ನು ಬಿಟ್ಟು ಬೇರೆ ನುಡಿಗಳನ್ನು ಮಾತನಾಡಬಹುದು. ಒಂದು ಸಮಯದಲ್ಲಿ ಕನ್ನಡ ನಾಡಿನ ಎಲ್ಲೇ ಮಧ್ಯ ಮಹಾರಾಷ್ಟ್ರದವರೆಗೂ ಹಬ್ಬಿತ್ತು ಎಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಇಂದು ಕನ್ನಡ  ಗಡಿ ಬೆಳಗಾವಿಯಲ್ಲಿ ಏದುಸಿರು ಬಿಡುತ್ತಿದೆ. ಸೊಲ್ಲಾಪುರ ಕನ್ನಡ ಭಾಷಿಕರಿಂದಲೇ ತುಂಬಿದ್ದರೂ, ಕನ್ನಡ ನಾಡಿನ ಭಾಗವಾಗಲಿಲ್ಲ. ಕಾಸರಗೋಡು, ಊಟಿ, ಆದೋನಿಗಳು ಹೊರಗೇ ಉಳಿದವು. ಈ ಉದಾಹರಣೆ ಮೇಲಿನ ನನ್ನ ಪ್ರಾಕಲ್ಪನೆಯನ್ನು (hypothesis) ಪುಷ್ಟೀಕರಿಸುತ್ತದೆ.

          ಭಾರತದ ಸಮಾಜಿಕ ವ್ಯವಸ್ಥೆಯ ಸನ್ನಿವೇಶದಲ್ಲಿ ಭಾಷೆ ಇಲ್ಲಿಯ ವರ್ಣ-ಜಾತಿಯೊಂದಿಗೆ ನಿಕಟ ಸಂಬಂಧ ಹೊಂದಿದೆ. ಸ್ತರವಿನ್ಯಾಸದ ಏಣಿ ಶ್ರೇಣಿಯಲ್ಲಿ ನೀವು ಕೆಳಮುಖವಾಗಿ ಚಲಿಸಿದಂತೆ ಶೂದ್ರ ಮತ್ತು ದಲಿತರ ನೆಲೆಗಳ ಪಾರಂಪರಿಕವಾದ ಸ್ಥಾನವನ್ನು ಹೊಂದ್ದಿದ್ದನ್ನು ನೀವು ಗಮನಿಸಬಹುದು. ಶೂದ್ರ ಮತ್ತು ದಲಿತರ ಬದುಕಿನ ಕನ್ನಡವು, ಅದರಲ್ಲೂ ವಿಶೇಶವಾಗಿ ದಲಿತರ ಕನ್ನಡವು ಸಂಸ್ಕೃತದ ಪ್ರಭಾವದಿಂದ ಸಾಪೇಕ್ಷವಾಗಿ ಮುಕ್ತವಾಗಿದ್ದನ್ನು ಕಾಣಬಹುದು. ದಿನ ನಿತ್ಯ ಬದುಕಿನ ವ್ಯವಾಹರಗಳಲ್ಲಿ ಮತ್ತು ಸಂಬಂಧಗಳಲ್ಲಿ ಮೂಲ ಕನ್ನಡ ಶಬ್ದಗಳೇ ಹೆಚ್ಚು.  ಹೆಸರಗಳು ಕೂಡ ದೇಸಿ. ಉದಾಹರಣೆಗೆ ಗಂಡಸರು ಚನ್ನಪ್ಪ, ಚನ್ನಪ್ಪ ಗೌಡ. ಚನ್ನಯ್ಯ, ಜವರಯ್ಯ, ಜವರೇಗೌಡ, ಮಾಳಿಗೇಗೌಡ, ಮಾಳಿಗಪ್ಪ, ಕಾಳಮ್ಮ, ತಿಮ್ಮಕ್ಕ, ಪುಟ್ಟಕ್ಕ, ಸಣ್ಣೇಗೌಡ, ಸಣ್ಣಶೆಟ್ಟಿ ಎಂದಿರುತ್ತಿದ್ದವು. ದೇವಾಲಯಕ್ಕೆ ಗುಡಿ ಎಂದು ಹೆಚ್ಚು ಬಳಸಲಾಗುತ್ತಿತ್ತು.  ಸಂಸ್ಕೃತದ ’ಪ್ರಸಾದ’ಕ್ಕೆ ಬದಲಾಗಿ  ’ಚರ್ಪು” ಎಂಬ ಪದ, ದೀಪಕ್ಕೆ ಸೊಡರು (ತುಳುವಿನಲ್ಲಿ ತುಡರ್) ಎಂದು ವ್ಯಾಪಕವಾಗಿ ಬಳಕೆಯಾಗುತ್ತಿತ್ತು. ಇಂದು ಕನ್ನಡದ ಮೇಲೆ ಸಂಸ್ಕೃತದ ದಾಳಿ ಎಗ್ಗಿಲ್ಲದೇ ನಡೆಯುತ್ತಿದೆ. ಹಾಗೆ ಸಂಸ್ಕೃತದ ಪದಗಳು ಕನ್ನಡದಲ್ಲಿ ನುಸುಳುವುದು ಕೇವಲ creative ಆದ ಸಂಗತಿಯಾದೇ ಸೂಕ್ಶ್ಮ ಏಣಿ ಶ್ರೇಣಿಯ, ಶ್ರೇಷ್ಟ-ಕನಿಷ್ಟಗಳ ಪ್ರಜ್ನೆಯ ನುಸುಳುವಿಕೆಯಾಗಿದೆ. ಹಾಲಿನ ಅಂಗಡಿ  ಎಂಬುದರ ಬದಲಿಗೆ ಕ್ಷೀರ ಕೇಂದ್ರ ಎಂದು ಬಳಕೆಯಾಗುವುದು ಕನ್ನಡದ ನೆಲೆ, ಸಂಸ್ಕೃತಿಯನ್ನು ಸದ್ದಿಲ್ಲದ್ದೇ ಹೊಸಕಿ ಹಾಕುವುದೇ ಆಗಿದೇ. ಇಂಥ ಉದಾಹರಣೆಗಳು ಸಾಕಷ್ಟಿವೆ. ಜಾಗತಿಕರಣದ ಸಂಸ್ಕೃತಿಯ ಏಕ ಸ್ವರೂಪಿಯ ನೆಲೆಗಳು ದಾಳಿ ಮಾಡುತ್ತಿರುವ ಸಂದರ್ಭದಲ್ಲಿ ನಾವು ಕೇವಲ ಇಂಗ್ಲೀಷಿನ ಬಗ್ಗೆ ಮಾತ್ರ ಜಾಗೃತೆಯನ್ನು ಹೊಂದ್ದಿದ್ದರಷ್ಟೇ ಸಾಲದು, ಸಂಸ್ಕೃತ, ಹಿಂದಿ ಹೇರಿಕೆ ಮತ್ತು ಯಜಮಾನ್ಯತೆಯ ಬಗ್ಗೆ ಎಚ್ಚರದಿಂದಿರಬೇಕಾಗಿದೆ. ಆಗ ಮಾತ್ರ ಅಳಿದುಳಿದ ನಮ್ಮ ಈ ಕನ್ನಡವನ್ನು, ಕನ್ನಡನಾಡನ್ನು ಉಳಿಸಿಕೊಳ್ಳಬಲ್ಲೆವು.

Tuesday, 30 October 2012

ವ್ಯಕ್ತಿ ಮತ್ತು ಸಮಾಜ


ಸಮಾಜವೆಂಬ ಪರಿಕಲ್ಪನೆ (ಸಾಮಾನ್ಯರ ಹಾಗೆಯೇ ಸಮಾಜಶಾಸ್ತ್ರಜ್ನರ ಪರಿಕಲ್ಪನೆಯಾಗಿ) ಮತ್ತು ಅದರ ಅಸ್ತಿತ್ವವೇ ಸಾಧ್ಯವಾಗಿರುವುದು ಮನುಷ್ಯ ಹೊಂದಿರುವ ಪ್ರತಿಫಲನ ಸಾಮರ್ಥ್ಯದಿಂದ (reflexive capacity). ಹಾಗೆಯೇ ಭಾಷೆ,  ಸಂಸ್ಕೃತಿ, ಧರ್ಮ, ವಿಜ್ನಾನ, ತಂತ್ರಜ್ನಾನಗಳ ಸೃಷ್ಟಿ (creation) ಮನುಶ್ಯರ ಸಮಷ್ಟಿಯ ನೆಲೆಯ (collective premise) ಮೇಲೆ ಅವಲಂಬಿತವಾಗಿದೆ. ಇಬ್ಬರು ಹಾಗು ಇಬ್ಬರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ವ್ಯಕ್ತಿಗಳು ಒಟ್ಟಿಗೆ ಜೀವಿಸದ್ದಿದ್ದಲ್ಲಿ, ಸಮಾಜವಿರಲಾರದು, ಹಾಗೆಯೇ ಮನುಷ್ಯ ಸಮಾಜದ ಈ ಯಾವ ವೈಷ್ಟಿತೆಗಳು ಇರುವುದಕ್ಕೆ ಸಾಧ್ಯವಿಲ್ಲ. ಅದಕ್ಕಿಂಕ ಮಿಗಿಲಾಗಿ ಮನುಷ್ಯನ ಅಸ್ತಿತ್ವವೂ ಇರುವುದಿಲ್ಲ. ಗುಂಪಿನಲ್ಲಿ ವಾಸಿಸುವುದು ಎಲ್ಲ ಜೀವಿಗಳ ವೈಷಿಷ್ಟತೆ. ಸಮಾಜಶಾಶ್ತ್ರಜ್ನ George Herbert Meadರವರ ಪ್ರಕಾರ ಜನನ ಮತ್ತು ಬೆಳವಣಿಗೆಯ ಹಂತದಲ್ಲಿ  ಮನುಶ್ಯನ ಜೈವಿಕ ದೌರ್ಬಲ್ಯತೆಯು (Biological Frailty) ಉಳಿದ ಜೀವಿಗಳಿಗೆ ಹೋಲಿಸಿದರೆ ಅಧಿಕ. ಈ ಅಸಹಾಯಕತೆಯೇ ವ್ಯಕ್ತಿಯು ಇತರ ವ್ಯಕ್ತಿಗಳನ್ನು ತೀವ್ರವಾಗಿ ಅವಲಂಬಿಸುವಂತೆ ಮಾಡಿದೆ ಮತ್ತು ಈ ಅವಲಂಬನೆಯೇ ಮನುಷ್ಯನ ಕ್ರಿಯೆ ಮತ್ತು ಬದುಕನ್ನು ಸಹಕಾರದ ನೆಲೆಯ ಮೇಲೆ ರೂಪುಗೊಳ್ಳಲು ಕಾರಣವಾಗಿದೆ ಎಂದಿದ್ದಾರೆ. ಸಮಾಜವು ಜೈವಿಕ ದುರ್ಬಲ್ಯತೆ ಒಡ್ಡುವ ಸಮಸ್ಯೆಗಳಿಂದ ಹೊರಬರಲು ಪರಸ್ಪರ ಅವಲಂಬನೆಯ ಜೊತೆಗೆ ಇತರೆ ಸಹಕಾರ ಕ್ರಿಯಗೆಳ ಮೇಲೆ ನಿಂತಿದೆ. ಆದ್ದರಿಂದ ಸೂಕ್ಶ್ಮ,  ನಿತ್ಯ ಬದುಕಿನ ಚಟುವಟಿಕೆಗಳು (every day activities) ಹಾಗೆಯೇನಿತ್ಯ ಬದುಕಿನ ಚಟುವಟಿಕೆಗಳ ಅಭಿವ್ಯಕ್ತಿಯಾಗಿಯೇ ಸಮಗ್ರ (macro) ಸ್ವರೂಪದ ಸಂಗತಿಗಳು ಅಂದರೆ ಕುಟುಂಬ, ವಿವಾಹ, ಧರ್ಮ, ಅರ್ಥೋ-ರಾಜಕೀಯ ವ್ಯವಸ್ಥೆಗಳನ್ನು ನಾವು ಕಾಣುತ್ತೇವೆ. ಈ ಸಂಗತಿಗಳು ಸಹಕಾರ ನೆಲೆಯ ವಿಸ್ತರಣೆಗಳೇ ಆಗಿರುತ್ತವೆ ಮತ್ತು ವ್ಯಕ್ತಿಗಳ ಅಸ್ತಿತ್ವಕ್ಕಾಗಿಯೇ ರೂಪುಗೊಂಡಿರುತ್ತವೆ. ವ್ಯಕ್ತಿಯ ವಿಕಸನ ಮತ್ತು ಪ್ರಗತಿಗಾಗಿಯೇ ಅವುಗಳು ಕಾರ್ಯನಿರ್ವಹಿಸುತ್ತವೆ. ಧರ್ಮ, ಪ್ರಭುತ್ವ, ಅರ್ಥವ್ಯವಸ್ಥೆಗಳು ವ್ಯಕ್ತಿಗಳಿಲ್ಲದೇ ಅವುಗಳ ಅಸ್ತಿತ್ವವೇ ಇಲ್ಲ.ಆದರೆ ವ್ಯಕ್ತಿಗಳ ಅವಶ್ಯಕತೆಗಾಗಿಯೇ ರೂಪುಗೊಂಡಿರುವ ವ್ಯವಸ್ಥೆಯು ಹಾಗದರೇ ಅವರನ್ನು ದಮನ ಮಾಡಲು ಪ್ರಯತ್ನಿಸುವುದೇಕೆ?

Saturday, 27 October 2012

ಭ್ರಷ್ಟಾಚಾರ ಮತ್ತು ಜಾತಿ ವ್ಯವಸ್ಥೆ




ಭ್ರಷ್ಟಾಚಾರ ಮತ್ತು ಜಾತಿ ವ್ಯವಸ್ಥೆ






 ಚಿತ್ರ ಕೃಪೆ: http://www.nowpublic.com/environment/hunger

ಅರವಿಂದ ಕೇಜ್ರಿವಾಲರ India Against Corruption ಕೇವಲ ಹಣವನ್ನು ನ್ಯಾಯಸಮ್ಮತವಲ್ಲದ ಮಾರ್ಗದಲ್ಲಿ ಪಡೆದು ಕೆಲಸ ಮಾಡಿಕೊಡುವುದನ್ನು ಮಾತ್ರ ಭ್ರಷ್ಟಾಚಾರವೆಂದು ಭಾವಿಸಿದಂತಿದೆ. ಸದ್ಯದ ಅವರ ಹೋರಾಟ ಕೇವಲ ಹಣದ ವ್ಯವಹಾರದ ಭ್ರಷ್ಟಾಚಾರಕ್ಕೆ ಸೀಮಿತವಾಗಿದೆ. ಆದರೆ ಭ್ರಷ್ಟಾಚಾರ ಮೂಲದಲ್ಲಿ ಅದೊಂದು ಮನಸ್ಥಿತಿ ಮನೋಭಾವನೆಗಳ ಗುಚ್ಛವಾಗಿದ್ದು,  ನಮ್ಮ ಕ್ರಿಯೆಗಳಲ್ಲಿ ಪ್ರಕಟವಾಗುತ್ತದೆ . ಹಾಗೆಯೇ ಭ್ರಷ್ಟಾಚಾರವೆಂಬುದು ಉಳಿದ ಸಮಾಜಗಳಿಗೆ ಹೋಲಿಸಿದಾಗ ದಕ್ಷಿಣ ಏಷ್ಯಾದ ಸಮಾಜಗಳಲ್ಲಿ, ವಿಷೇಶವಾಗಿ ಭಾರತೀಯ ಸಮಾಜದಲ್ಲಿ ಅದರ ಬೇರುಗಳನ್ನು ವರ್ಣ- ಜಾತಿ ವ್ಯವಸ್ಥೆಯ ಮುಖಾಂತರವೇ ಅರ್ಥಮಾಡಿಕೊಳ್ಳುವುದು ಸಮಂಜಸವಾಗುತ್ತದೆ. ಏಕೆಂದರೆ ಹುಟ್ಟಿನ ಆಧಾರದ ಮೇಲೆ ವ್ಯಕ್ತಿಗಳನ್ನು ಗುಂಪುಗಳನ್ನಾಗಿ ವರ್ಗೀಕರಿಸುವ ಸಾವಿರಾರು ವರ್ಷದ ಜಾತಿಯ ಆಚರಣೆಯೇ ಪ್ರಾಥಮಿಕವಾದ ಭ್ರಷ್ಟಾಚಾರ. ಭೌತಿಕ ಪರಿಸರದ ಮಡಿಲಿನಲ್ಲಿ ಅರಳುವ ಸಮಾಜವೊಂದರ  ಸದಸ್ಯರು ಹುಟ್ಟಿನ ಹಿನ್ನಲೆಯ ಆಧಾರದ ಮೇಲೆ ಪ್ರಭೇದಾತ್ಮಕ ಸ್ಥಾನ ಮತ್ತು ಅವಕಾಶಗಳನ್ನು ಪಡೆಯುವುದು ಮತ್ತು ಆ ಅವಕಾಶಗಳು ಮತ್ತು ಸ್ಥಾನಗಳು ನಿಕೃಷ್ಟವಾಗಿರುವುದು ಮೂಲಭೂತವಾದ ಭ್ರಷ್ಟಾಚಾರ. ಅಂತಹ ಭ್ರಷ್ಟಾಚಾರ ಸಮಾಜವೊಂದರ ಪರಿಕ್ರಮಕ್ಕೆ (order) ಮತ್ತು ಸಮತೋಲನಕ್ಕೆ (equilibrium) ಮಾರಕವಾದುದು. ಅಸಮಾನತೆಯ ವಿವಿಧ ಪ್ರಕಾರಗಳಿಂದ ಸೃಷ್ಟಿಯಾಗುವ ಹಸಿವು ಮತ್ತು ಹಸಿವಿನಿಂದ ಕಂಗೆಡುವ ಜನರು ಈ ರೂಕ್ಷ ಭ್ರಷ್ಟಾಚಾರದ ಬಲಿಪಶುಗಳೇ. ಇಂಥಹ ಭ್ರಷ್ಟಾಚಾರ ಸಹಸ್ರ ವರ್ಷಗಳಿಂದ ನಡೆದುಕೊಂಡು ಬಂದಿರುವುದರ ಪರಿಣಾಮವನ್ನು ಊಹಿಸಿಲಿಕ್ಕೂ ಸಾಧ್ಯವಿಲ್ಲ.  ಜಾತಿ ವ್ಯವಸ್ಥೆ ಪೋಶಿಸುವ ಸ್ವಾರ್ಥ, ಅಂದರೆ  ನಮ್ಮವರು, ನಮ್ಮವನು ಎಂಬ diffused emotionsಗಳು ಕ್ರಿಯೆಗಳಾಗಿ (actions) ರೂಪಾಂತರವಾಗುತ್ತವೆ. ಮತ್ತು ಅಂತಹ ಪ್ರಸರಿತ ಭಾವನೆಗಳಿಗೆ ವೈಚಾರಿಕ ಲೇಪನ ಸಿಕ್ಕಾಗ ಭ್ರಷ್ಟಾಚಾರ ಸಂಕೀರ್ಣವಾಗುತ್ತದೆ.  ಇಲ್ಲಿ ಕುಟುಂಬ, ಊರು, ಪ್ರಾಂತ್ಯ ಮತ್ತು ಅರ್ಥೋ-ರಾಜಕೀಯ ವ್ಯವಸ್ಥೆ, ಧರ್ಮಗಳು ಈ ವರ್ಣ-ಜಾತಿಯ ಚೌಕ್ಕಟ್ಟಿನಲ್ಲಿಯೇ ಉರುಳಾಡುತ್ತವೆ.

ಜಾತಿ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿ ಉಲ್ಲೀಖನೀಯ ಸಮೂಹ ವರ್ತನೆಯನ್ನು ನಾವು ಕಾಣಬಹುದು (reference group behaviour).ಒಂದು ಜಾತಿಗೆ ಸೇರಿದ ನಾಯಕನೊಬ್ಬ ಮಂತ್ರಿ, ಮುಖ್ಯಮಂತ್ರಿಯಾಗಿ ನೆಡುಸುವ ಭ್ರಷ್ಟಾಚರ ಇತರೆ ಜಾತಿಗಳು ನಡೆಸುವ ಭ್ರಷ್ಟಾಚಾರಕ್ಕೆ ಪ್ರೇರಣಯಾಗಬಹುದು ಮತ್ತು ಅನುಕರಣೆಗೆ ಕಾರಣವಾಗಬಹುದು. ದೊಡ್ಡ ಪ್ರಮಾಣದಲ್ಲಿ ಲೂಟಿ ಹೊಡೆದರೂ, ವ್ಯವಸ್ಥೆಯ ಕಾನೂನಿಗೆ ಮಣ್ಣೆರೆಚುವ ಬಲಾಢ್ಯರಿಗೆ ಜಾತಿ ಮತ್ತು ಧರ್ಮದ ರಕ್ಷಣೆ ಸಿಕ್ಕುತ್ತದೆ. ಅವರ ಅನೀತಿಯುತ ಕ್ರಿಯೆಗಳಿಗೆ  ಸಮರ್ಥನೆ ಸಿಗುತ್ತದೆ. ಅಲ್ಲಿಗೆ ಅಧಿಕಾರಕ್ಕಾಗಿ ನೆಡೆಯುವ ಪೈಪೋಟಿಯು ಜನಹಿತಕ್ಕಲ್ಲದೆ ಕೇವಲ ಸ್ವಾರ್ಥಕ್ಕಾಗಿ ಮಾರ್ಪಾಡಾಗುತ್ತದೆ ಮತ್ತು ಆ ಪೈಪೋಟಿಯು ಹೊರನೋಟಕ್ಕೆ ವೈಚಾರಿಕತೆಯ tone ಪಡೆದುಕೊಂಡು ಸಂಘಟಿತ  ರೂಪ ಪಡೆದುಕೊಳ್ಳುತ್ತದೆ. ಸ್ವಾರ್ಥ ಮತ್ತು ಸಂಕುಚಿತವಾದ ಗುಂಪೊಂದರ ಹಿತಾಸಕ್ತಿಗಳ ಸಾಧನೆಗಾಗಿ ಬಳಕೆಯಾಗುವ ಅಧಿಕಾರ ದುಷ್ಟವು ಮತ್ತು ಪರಿಸರ ವಿರೋಧಿಯಾಗಬಹುದು
 ಕೇವಲ ಪುಡಿಗಾಸಿಗೊಸ್ಕರ ಹಣಕ್ಕೆ ಕೈ ಒಡ್ಡುವ, ಕೇವಲ ರುಜತ್ವವಲ್ಲದ ಹಣಕೊಸ್ಕರ ನಡೆಯುವ ಭ್ರಷ್ಟಾಚಾರವನ್ನು ಹತ್ತಿಕುವುದು ಸುಲಭ. ಆದರೆ ಭ್ರಷ್ಟಾಚಾರವು ಜಾತಿ-ವರ್ಣ ವ್ಯವಸ್ಥೆಯ ಅಭಿವ್ಯಕ್ತಿಯಾದಾಗ ಅದನ್ನು ಸೋಲಿಸುವುದು ಸವಾಲಾಗುತ್ತದೆ. ಆಗ ಭ್ರಷ್ಟಾಚಾರದ ಬಗೆಗಿನ ನಮ್ಮ ವ್ಯಾಖ್ಯೆಯು ಸಮಗ್ರವಾಬೇಕಾಗುತ್ತದೆ ಮತ್ತು ವಿಶಾಲವಾಗಬೇಕಾಗುತ್ತದೆ.